ಡೆನ್ವರ್
ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಾಲರ್ಯಾಡೋ ರಾಜ್ಯದ ಮುಖ್ಯಪಟ್ಟಣ. ಪ್ರಮುಖ ವಾಣಿಜ್ಯನಗರ, ಡೆನ್ವರ್ ಕೌಂಟಿಯ ಆಡಳಿತಕೇಂದ್ರ. ಸೌತ್ ಪ್ಲ್ಯಾಟ್ ನದಿಯ ದಡದಲ್ಲಿ ಉ.ಅ. 390 44' 53" ಮತ್ತು ಪ.ರೇ. 104ಲಿ 50' 43" ಮೇಲೆ ಇದೆ. ಜನಸಂಖ್ಯೆ 5,14,678 (1970). ಇದು ರಾಕೀ ಪರ್ವತದ ತಪ್ಪಲಿನಿಂದ 12 ಮೈ. ಪೂರ್ವಕ್ಕೆ, ಸಮುದ್ರಮಟ್ಟದಿಂದ 5,280' ಎತ್ತರದಲ್ಲಿರುವುದರಿಂದ ಇದರ ವಾಯುಗುಣ ಹಿತಕರವಾದ್ದು. ವಾತಾವರಣದ ಆದ್ರ್ರತೆ ಕಡಿಮೆ (ಸರಾಸರಿ 52%). ವಾರ್ಷಿಕ ಅವಪತನ 14.2". ವರ್ಷದಲ್ಲಿ 249 ದಿನ ಬಿಸಲು ಇರುತ್ತದೆ. ಮಹಾಬಯಲಿನ ಪಶ್ಚಿಮದ ಅಂಚಿನಲ್ಲಿರುವ ಈ ನಗರ ಈ ಪ್ರದೇಶದ ಬಹುಭಾಗಕ್ಕೆ ವಾಣಿಜ್ಯ, ಹಣಕಾಸು ಹಾಗೂ ಸಾರಿಗೆಯ ಕೇಂದ್ರ. ಮಿಸೂರಿ ನದಿಯಿಂದ ಪೆಸಿಫಿಕ್ ತೀರದ ರಾಜ್ಯಗಳ ವರೆಗಿನ ಪ್ರದೇಶದಲ್ಲಿ ಇದೇ ಅತ್ಯಂತ ದೊಡ್ಡ ಉತ್ತರ ಅಮೆರಿಕನ್ ನಗರ. ಸುತ್ತಮುತ್ತಣ ಗಣಿಸಂಸ್ಥೆಗಳ ಕೇಂದ್ರ ಕಚೇರಿಗಳು ಇಲ್ಲಿ ಸ್ಥಾಪಿತವಾಗಿವೆ. ಇದು ದನಕುರಿಗಳ ದೊಡ್ಡ ಮಾರುಕಟ್ಟೆ. ಮಾಂಸ, ಹಣ್ಣು ಮತ್ತು ತರಕಾರಿಗಳ ಡಬ್ಬೀಕರಣ ಕೈಗಾರಿಕೆ ಅಭಿವೃದ್ಧಿ ಹೊಂದಿದೆ. ಗಣಿ ಹಾಗೂ ಇತರ ಕೈಗಾರಿಕೆಗಳಿಗೆ ಅಗತ್ಯವಾದ ಯಂತ್ರೋಪಕರಣಗಳ ಮಾರಾಟಕೇಂದ್ರವಿದು, ನಗರದ ನೆರೆಹೊರೆಯಲ್ಲಿ ಹೈನುಗಾರಿಕೆ ಮತ್ತು ಕೋಳಿಸಾಗಣೆ ನಡೆಯುತ್ತದೆ; ಬೀಟ್ ಸಕ್ಕರೆ ಕಾರ್ಖಾನೆಗಳು ಇವೆ. 

	ಡೆನ್ವರ್ 1867ರಲ್ಲಿ ಕಾಲರ್ಯಾಡೋ ರಾಜ್ಯದ ರಾಜಧಾನಿಯಾಯಿತು. ಇದು ಗಣಿಸಂಸ್ಥೆಗಳ ಕೇಂದ್ರವೆಂಬುದಕ್ಕೆ ಸಂಕೇತವಾಗಿ ಇಲ್ಲಿಯ ವಿಧಾನಭವನದ 272 ಅಡಿಗಳ ಗೋಪುರಕ್ಕೆ ಚಿನ್ನದ ಮುಲಾಮು ಹಚ್ಚಲಾಗಿದೆ. ನಗರದ ಆಡಳಿತಕ್ಕೆ ಒಬ್ಬ ಮೇಯರ್ ಹಾಗೂ ನಗರ ಸಭೆ ಉಂಟು. ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಬ್ಯಾಂಕ್, ಕಟ್ಟಡ, ಡೆನ್ವರ್ ವಿಧಾನ ಭವನ, ಪುರಭವನ (1908) - ಇವು ಪ್ರಮುಖ ಕಟ್ಟಡಗಳು.

	ನಗರದಲ್ಲಿ 90ಕ್ಕೂ ಹೆಚ್ಚಿನ ಶಾಲೆಗಳಿವೆ. ಡೆನ್ವರ್ ವಿಶ್ವವಿದ್ಯಾಲಯ 1864ರಲ್ಲಿ ಸ್ಥಾಪಿತವಾಯಿತು. ರೆಜಿಸ್ ಕಾಲೇಜು (1888), ಕಾಲರ್ಯಾಡೋ ಮಹಿಳಾ ಕಾಲೇಜು (1909), ಐಲಿಫ್ ದೇವತಾಶಾಸ್ತ್ರ ಶಾಲೆ (1892), ಲೊರೆಟ್ಟೊ ಹೈಟ್ಸ್ ಕಾಲೇಜು (1918) ಮತ್ತು ವೈದ್ಯಕೀಯ ಶಾಲೆ ಪ್ರಮುಖ ಶಿಕ್ಷಣ ಸಂಸ್ಥೆಗಳು. ಕಾಲರ್ಯಾಡೋ ವಿಶ್ವವಿದ್ಯಾಲಯದ ವಿಸ್ತರಣಕೇಂದ್ರವೊಂದು ಇಲ್ಲಿ ಸ್ಥಾಪಿತವಾಗಿದೆ. ಕಾಲರ್ಯಾಡೋ ಗಣಿ ಶಾಲೆ ಇಲ್ಲಿಗೆ 14 ಮೈ. ದೂರದಲ್ಲಿರುವ ಗೋಲ್ಡನ್‍ನಲ್ಲಿ ಸ್ಥಾಪಿತವಾಗಿದೆ. ಡೆನ್ವರ್ ಸಾರ್ವಜನಿಕ ಗ್ರಂಥಾಲಯದಲ್ಲಿ 6,00,000 ಗ್ರಂಥಗಳೂ 3,00,000 ಪ್ರಲೇಖನಗಳೂ ಸಂಚಾಲಗೊಳ್ಳುತ್ತವೆ. ಕಾಲರ್ಯಾಡೋ ರಾಜ್ಯದ ವಸ್ತುಸಂಗ್ರಹಾಲಯ ಹಾಗೂ ಕಲಾವಸ್ತುಸಂಗ್ರಹಾಲಯ ನಗರದಲ್ಲಿವೆ. ಇಲ್ಲಿ ಪ್ರಕಟವಾದ ಪ್ರಥಮ ಪತ್ರಿಕೆ ರಾಕಿ ಮೌಂಟನ್ ನ್ಯೂಸ್ (1859). ನಗರಕ್ಕೆ ದೂರವಾಣಿ ಸಂಪರ್ಕ ಏರ್ಪಟ್ಟಿದ್ದು 1863ರಲ್ಲಿ.

	1850ರಲ್ಲಿ ಕ್ಯಾಲಿಪೋರ್ನಿಯದ ಕಡೆಗೆ ಪ್ರಯಾಣ ಮಾಡುತ್ತಿದ್ದ ಚೆರೋಕಿ ಇಂಡಿಯನರಿಗೆ ಈಗಿನ ಡೆನ್ವರ್ ನಗರಕ್ಕೆ ಸಮೀಪದ ರಾಲ್‍ಸ್ಟನ್ ಕ್ರೀಕ್‍ನಲ್ಲಿ ಚಿನ್ನ ಸಿಕ್ಕಿತು. ತರುವಾಯ ವಿಲಿಯಂ ಗ್ರೀಸ್ ರಸೆಲ್ ಎಂಬಾತನ ನಾಯಕತ್ವದಲ್ಲಿ ಸ್ವರ್ಣಾನ್ವೇಷಿಗಳು ಈ ಪ್ರದೇಶಕ್ಕೆ ಬಂದು, ಚೆರಿ ಕ್ರೀಕ್ ಬಳಿ ಬಿಡಾರ ಹಾಕಿದರು (1858). ಇವರು ಸ್ಥಾಪಿಸಿದ ಡೆನ್ವರ್, ಆರರೀಯ ಮತ್ತು ಹೈಲ್ಯಾಂಡ್ ವಸತಿಗಳು 1860ರಲ್ಲಿ ಡೆನ್ವರ್ ಎಂಬ ಹೆಸರಿನಲ್ಲಿ ಸಂಘಟಿತವಾದುವು. ಕ್ಯಾನ್ಸಸ್‍ನ ಗವರ್ನರ್ ಜೇಮ್ಸ್ ಡಬ್ಲ್ಯು. ಡೆನ್ವರನ ಅಭಿಧಾನವೇ ನಗರಕ್ಕೂ ಬಂತು. 1861ರಲ್ಲಿ ಕಾಲರ್ಯಾಡೋ ರಾಜ್ಯ ರಚನೆಯಾದಾಗ ಡೆನ್ವರ್ ಪೌರಸಭೆಗೆ ನಗರ ಸನ್ನದು ನೀಡಲಾಯಿತು.

	ಅಮೆರಿಕದ ಅಂತರ್ಯುದ್ಧದಲ್ಲಿ ಕಾಂಗ್ರೆಸಿನ ವಿರುದ್ಧ ನಿಂತ ರಾಜ್ಯಗಳನ್ನು ಎದುರಿಸಿ ಈ ನಗರ ಸೈನಿಕರನ್ನು ಒದಗಿಸಿತು. ಲ ಗ್ಲೋರಿಯೆಟ್ ಕಣಿವೆಯಲ್ಲಿ ವಿರೋಧಿ ರಾಜ್ಯಗಳ ಸೈನ್ಯವನ್ನು ಸೋಲಿಸಿತು. 1863ರ ಬೆಂಕಿಯೂ 1864ರ ನದಿ ಪ್ರವಾಹವೂ ಈ ನಗರ ಅನುಭವಿಬೇಕಾಗಿ ಬಂದ ಎರಡು ಭಾರಿ ನಷ್ಟಗಳು. ಡೆನ್ವರ್ ನಗರ ಕಾಲರ್ಯಾಡೋ ರಾಜ್ಯದ ಮುಖ್ಯ ಪಟ್ಟಣವಾದ್ದು 1867ರಲ್ಲಿ. ಡೆನ್ವರ್ ಹಾಗೂ ಪೈಯಾನ್ ನಗರಗಳ ನಡುವೆ ರೈಲು ಸಂಚಾರ ಪ್ರಾರಂಭವಾದ್ದು 1870ರಲ್ಲಿ. ಷೈಯಾನ್ ಮೂಲಕ ಈ ನಗರಕ್ಕೆ ಯೂನಿಯನ್ ಪೆಸಿಫಿಕ್ ರೈಲುಮಾರ್ಗದೊಂದಿಗೆ ಸಂಪರ್ಕ ಏರ್ಪಟ್ಟಿತು. ಇದರಿಂದಾಗಿ 1872ರ ಹೊತ್ತಿಗೆ ಈ ನಗರ ದೊಡ್ಡ ರೈಲ್ವೆ ಹಾಗೂ ರಸ್ತೆ ಸಂಧಿಸ್ಥಳವಾಯಿತು. ನಗರ ಮತ್ತಷ್ಟು ಬೆಳೆಯಲು ಕಾರಣವೆಂದರೆ ಲೆಡ್‍ವಿಲ್ ಬಳಿ ಬೆಳ್ಳಿಯ ನಿಕ್ಷೇಪ ಪತ್ತೆಯಾದ್ದು. ಎರಡನೆಯ ಮಹಾಯುದ್ಧದ ತರುವಾಯ ಹೆಚ್ಚು ಜನ ಇಲ್ಲಿಗೆ ವಲಸೆ ಬಂದರು. ನಗರ ಇನ್ನಷ್ಟು ಬೆಳೆಯಿತು.

	ಏಳು ಪ್ರಮುಖ ರೈಲುಮಾರ್ಗಗಳು ಡೆನ್ವರ್ ನಗರದಲ್ಲಿ ಸಂಧಿಸುತ್ತವೆ. ಇಲ್ಲಿ ಆರು ಪ್ರಮುಖ ವಿಮಾನ ಸಂಸ್ಥೆಗಳ ಕಚೇರಿಗಳಿವೆ. ಮಾಫಟ್ ಸುರಂಗ ಮಾರ್ಗದಿಂದ ಪೆಸಿಫಿಕ್ ಸಾಗರದ ಅಂಚಿಗೆ ನೇರ ರೈಲ್ವೇ ಸಂಪರ್ಕ ಏರ್ಪಟ್ಟಿದೆ. ನಗರದ ಸ್ಟೇಪ್ಲ್‍ಟನ್ ವಿಮಾನ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ಸಂಧಿಸುತ್ತವೆ.

	ಚಳಿಗಾಲದ ಕ್ರೀಡೆಗಳಿಗೆ ಡೆನ್ವರ್ ಒಂದು ಮುಖ್ಯಕೇಂದ್ರ. ನಗರಕ್ಕೆ ಸಮೀಪದಲ್ಲಿರುವ ಎವಾನ್ಸ್ ಪರ್ವತಶಿಖರ (14,360') ಒಂದು ಪ್ರವಾಸಿಕ್ಷೇತ್ರ. ಇದರ ನೆತ್ತಿಯ ಮೇಲೆ ಡೆನ್ವರ್ ವಿಶ್ವವಿದ್ಯಾಲಯದ ಕಾಸ್ಮಿಕ್ ಕಿರಣ ಪ್ರಯೋಗಾಲಯವಿದೆ. ಇದರ ತಪ್ಪಲುಗಳಲ್ಲಿ ವಿಹಾರಯೋಗ್ಯವಾದ ಹಲವಾರು ಅರಣ್ಯ ಪ್ರದೇಶಗಳುಂಟು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ